ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ
ಗೌರವಾನ್ವಿತರು ದಿನಾಂಕ:02-12-1964 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ದಿವಂಗತ ಶ್ರೀ. ಪುಟ್ಟಸ್ವಾಮಿಗೌಡ ಮತ್ತು ದಿವಂಗತ ಶ್ರೀಮತಿ ಕಾವೇರಮ್ಮ ಇವರ ಎರಡನೇ ಪುತ್ರರಾಗಿ ಜನಿಸಿದರು. ಸದರಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೆತ್ತೂರು ಮತ್ತು ಸಕಲೇಶಪುರದಲ್ಲಿ ಪೂರ್ಣಗೊಳಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು, ಸಕಲೇಶಪುರದಲ್ಲಿ ಪೂರ್ಣಗೊಸಿದರು.
ನಂತರ 1987 ರಿಂದ 1992 ರವರೆಗೆ ಮೈಸೂರು ವಿಶ್ವ ವಿದ್ಯಾಲಯದ ಎಂ. ಕೃಷ್ಣ ಕಾನೂನು ಕಾಲೇಜನಲ್ಲಿ ಐದು ವರ್ಷಗಳ ಕಾನೂನು ಪದವಿಯನ್ನು ಪಡೆದರು. ಸದರಿಯವರು ಹಾಸನದಲ್ಲಿ ಶ್ರೀ. ಕೆ. ಅನಂತರಾಮಯ್ಯ, ಹಿರಿಯ ನ್ಯಾಯವಾದಿಗಳು ಇವರ ಹತ್ತಿರ ಸಿವಿಲ್ ಮತ್ತು ಕ್ರಿಮಿನಲ್ ವಿಭಾಗಗಳಲ್ಲಿ ತಮ್ಮ ವಕೀಲ ವೃತ್ತಿಯ ಅಭ್ಯಾಸವನ್ನು ಪ್ರಾರಂಭಿಸಿದರು. ನಂತರ 1994 ರಲ್ಲಿ ತಮ್ಮ ವಕೀಲರ ವೃತ್ತಿಯ ಅಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರೆಸಿದರು. ಮಾನ್ಯರು ಗೌರವಾನ್ವಿತ ಉಚ್ಚ ನ್ಯಾಯಾಲಯ ಬೆಂಗಳೂರು ಹಾಗೂ ಜಿಲ್ಲಾ ನ್ಯಾಯಾಂಗದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡು ಕಡೆ ಅಭ್ಯಾಸ ಮಾಡಿರುತ್ತಾರೆ.
2002 ನೇ ಇಸ್ವಿಯಲ್ಲಿ ನೇರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಆಯ್ಕೆಯಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ ಮತ್ತು ಮಂಗಳೂರುನಲ್ಲಿ ಸೇವೆಸಲ್ಲಿಸಿದರು. ನಂತರ, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಚ್ಚ ನ್ಯಾಯಾಲಯದ ರಜಿಸ್ಟ್ರಾರ್ (ಆಡಳಿತ), ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಮೈಸೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ರಜಿಸ್ಟ್ರಾರ್ (ಮೂಲ ಸೌಕರ್ಯ), ರಜಿಸ್ಟ್ರಾರ್ (ಆಡಳಿತ) ಗೌರವಾನ್ವಿತರ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ, ಕರ್ನಾಟಕ ಉಚ್ಚ ನ್ಯಾಯಾಲಯ, ಲಘ ವ್ಯಾಜ್ಯಗಳ ನ್ಯಾಯಾಲಯ, ರಜಿಸ್ಟ್ರಾರ್ (ವಿಜಿಲನ್ಸ್), ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ದಿನಾಂಕ: 03-11-2018 ರಂದು ಪದೋನ್ನತಿ ಹೊಂದಿರುತ್ತಾರೆ. ನಂತರ ದಿನಾಂಕ: 26-02-2020 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಹೊಂದಿರುತ್ತಾರೆ.
ಸದರಿಯವರು ಶ್ರೀಮತಿ. ಹೇಮಾವತಿ ಇವರನ್ನು ವಿವಾಹವಾಗಿದ್ದು, ಇಂಜಿನಿಯರಿಂಗ್ ಪದವೀಧರರಾದ ಕು.ಸಹನಾ ಸಂದೇಶ ಮತ್ತು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಕು. ಸ್ನೇಹಾ ಸಂದೇಶ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕು.ಸ್ನೇಹಾ ಸಂದೇಶ ಇವರು ಈಗ ಬೆಂಗಳೂರಿನ ಎಂ. ಎಸ್ ರಾಮಯ್ಯ, ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನಶಿಪ್ ಮಾಡುತ್ತಿದ್ದಾರೆ.
ಹವ್ಯಾಸಗಳುಃ ಓದುವುದು ಮತ್ತು ಕ್ರಿಕೆಟ್ ಆಡುವುದು.